ಸುಬ್ಬರಾವ್ ಅಶ್ವತ್ ನಾರಾಯಣ ಅಂದ್ರೆ ಬಹುಶ: ಯಾರಿಗೂ ಥಟ್ ಅಂತ ನೆನಪಾಗುವುದಿಲ್ಲ. ಅದೇ ಚಾಮಯ್ಯ ಮೇಷ್ಟ್ರು ಅಂದ್ರೆ ಬೇಗ ನೆನಪಾಗುತ್ತೆ. "ನಾಗರಹಾವಿನ" ಆ ಹಾವಾಡಿಗನ (ಮೇಷ್ಟ್ರಿನ) ಪಾತ್ರ ಅವರ ನಿಜವಾದ ಹೆಸರನ್ನೇ ಮರೆಸಿಬಿಟ್ಟಿದೆ. ಒಬ್ಬ ಕಲಾವಿದನಿಗೆ ಅದಕ್ಕಿಂತ ದೊಡ್ಡ ಗೌರವ ಬೇರೇನಿದೆ.
೨೫ನೇ ಮೇ ೧೯೨೫ ರಂದು, ಹಾಸನ ಜಿಲ್ಲೆಯ, ಅರಕಲಗೂಡು ತಾಲುಕಿನ, ಕರಗನಹಳ್ಳಿಯಲ್ಲಿ ಜನಿಸಿ, ಮೈಸೂರಿನಿಂದ ಕಲಾಸೇವೆ ನೆಡೆಸಿದ ಕೆ.ಎಸ್.ಅಶ್ವತ್, ಸ್ವತಂತ್ರ್ಯ ಹೋರಾಟದಲ್ಲಿ ಪಾಲ್ಲೊಂಡಿದ್ದವರು. ೧೯೫೬ ರಲ್ಲಿ ಸ್ತ್ರೀ ರತ್ನ ಎಂಬ ಕನ್ನಡ ಸಿನಿಮಾದಲ್ಲಿ ನಾಯಕನಟನಾಗಿ ಚಿತ್ರರಂಗ ಪ್ರವೇಶಿಸಿದರು. ನಾಯಕನಾಗೇ ಚಿತ್ರರಂಗ ಪ್ರವೇಶಿಸಿದರು ಖ್ಯಾತರಾಗಿದ್ದು ಪೋಶಕನಟರಾಗಿ. 350 ಕಿಂತ ಹೆಚ್ಚಿನ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ನಾಟಕಗಳನ್ನೇ ತರಬೇತಿ ಶಿಬಿರವನ್ನಾಗಿಸಿ ಸಿನಿಮಾ ಪಾತ್ರಗಳನ್ನು ಆಯ್ಕೆ ಮಾಡುವ ಕಾಲದಲ್ಲಿ ತಮ್ಮ ಮೋದಲ ಚಿತ್ರದಲ್ಲೆ ನಾಯಕನಟನಾದವರು.
ಕನ್ನಡದಲ್ಲಿ ಬಿ.ಜಯಮ್ಮ, ಉದಯಕುಮಾರ್, ಕಲ್ಯಾಣ್ ಕುಮಾರ್, ಲಕ್ಶ್ಮೀದೇವಿ, ಬಾಲಕೃಷ್ಣ, ನರಸಿಂಹರಾಜು ಅವರಂತಹ ಅದೇಷ್ಟೋ ಪೋಶಕ ನಟರು ಬಂದಿರಬಹುದು, ಆದರೆ ಅಶ್ವತ್ ಅವರ ವಿಶೇಷತೆನೆ ಬೇರೆ. ತಂದೆ, ಅಣ್ಣ, ಚಿಕ್ಕಪ್ಪ, ದೊಡ್ಡಪ್ಪ, ಅಳಿಯ ಹೀಗೆ ಯಾವುದೇ ಪಾತ್ರಕ್ಕೂ ಜೀವ ತುಂಬುತ್ತಿದ್ದ ವ್ಯಕ್ತಿ ಅಶ್ವತ್. ಮಾದರಿ ತಂದೆಯ ಪರಿಕಲ್ಪನೆ ನೀಡಿದ ಈ ನಟ, ಅದೇಕೋ ಹಾಸ್ಯ ಪಾತ್ರಗಳಲ್ಲಿ ಹೆಚ್ಚು ಕಾಣಿಸಲಿಲ್ಲ. ಮಾಡಿದ್ದೆಲ್ಲ ಗಂಭೀರ ಪಾತ್ರಗಳು. ಅಲ್ಲಲ್ಲಿ ಗಂಭೀರ ಹಾಸ್ಯ.
ಜೇನುಗೂಡಿನ "ನೀನೆಲ್ಲಿ ನಡೆವೆ ದೂರ, ಎಲ್ಲೆಲ್ಲೂ ಲೋಕವೆ" ಹಾಡೇ ಆಗಿರಬಹುದು, ಭಂಗಾರದ ಗುಡಿ ಚಿತ್ರದ "ಥೈಯ್ಯ ಥಕ ಥೈಯ್ಯ ಥಕ ಕುಣಿಯೋ ಬೊಂಬೆ" ಹಾಡೇ ಆಗಿರಬಹುದು ಇನ್ನೂ ಯಾರ ಮನಸ್ಸಿನಿಂದಲೂ ದೂರವಾಗಿಲ್ಲ. "ಎಮ್ಮೆ ತಮ್ಮಣ್ಣ", "ನಂದಾ ದೀಪ", "ಮುದುಡಿದ ತಾವರೆ ಅರಳಿತು", "ನೆಂಟರೋ ಗಂಟು ಕಳ್ಳರೋ", "ಗಾಳಿ ಗೋಪುರ", "ಹೃದಯ ಹಾಡಿತು", "ಕರ್ಣ", "ಶಬ್ದವೇದಿ", "ಧೂಮಕೇತು", "ಸಿಪಾಯಿ ರಾಮು", "ಶಃಭಾಶಃ ವಿಕ್ರಂ", "ನಾ ನಿನ್ನ ಬಿಡಲಾರೆ", "ಸತ್ಯ ಹರಿಶ್ಚ್ಂದ್ರ", "ಕಸ್ತೂರಿ ನಿವಾಸ", "ಬಂಗಾರದ ಪಂಜರ", "ನಾವಿಬ್ಬರು ನಮಗಿಬ್ಬರು", "ಕರುಣಾಮಯಿ", "Africaದಲ್ಲಿ ಶೀಲ", "ದಾರಿ ತಪ್ಪಿದ ಮಗ", "ಬೆಳ್ಳಿ ಮೋಡ", "ಗುರು ಜಗದ್ಗುರು", "ರಾಜ ನನ್ನ ರಾಜ", "ಬಾಜಾರ್ ಭೀಮ', "ಭೂಪತಿ", "ವಸಂತ ಲಕ್ಶ್ಮಿ", "ಬ್ರಂಹ ವಿಷ್ಣು ಮಹೇಶ್ವರ", "ಶೃತಿ ಸೇರಿದಾಗ", "ಭಾಗ್ಯಾದ ಲಕ್ಶ್ಮಿ ಬಾರಮ್ಮ", "ಹೊಸ ಬೆಳಕು", "ಗಾಳಿ ಮಾತು", ಹೀಗೆ ಅವರು ತೋರಿದ ನಟನಾ ಕೌಶಲ್ಯ ಕೆಲವೇ ಚಿತ್ರಗಳಲ್ಲಲ್ಲ ಹಲವು.
"ಆಶಾಡಭೂತಿ"ಯ ರಂಗಣ್ಣನ ಪಾತ್ರ ಜನ ಮೆಚ್ಚುಗೆ ಗಳಿಸಿದೆ. "ಜೇಡರ ಬಲೆಯ" ಖಳನಟನ ಪಾತ್ರ ಚೆನ್ನಾಗಿದ್ದರೂ ಜನರು ಅಶ್ವತರನ್ನು ಖಳನಟನಾಗಿ ಒಪ್ಪಲಿಲ್ಲ. ಕೆದರಿದ ಕೂದಲು, ಉಬ್ಬು ಹಲ್ಲು, ಅವಿನಾಶ.... ಅವಿನಾಶ.... ಎಂದು ಕಿರುಚುವ "ಜನ್ಮ ಜನ್ಮದ ಅನುಬಂಧ" ಚಿತ್ರದ ಆ ಹುಚ್ಚುದೊಡ್ಡಪ್ಪ. ಕೈಯ್ಯಲ್ಲಿ ಊರುಗೋಲು ಹಿಡಿದು, ಪುಂಡ ಶಿಶ್ಯನಿಗೆ ಬುದ್ದಿಮಾತು ಹೇಳುವ "ನಾಗರಹಾವಿನ" ಆ ಚಾಮಯ್ಯ ಮೇಷ್ಟ್ರು. ಬಿಳೀ ಕೂದಲು, ಗಾಂಧೀಜಿ ತರಹದ ಕನ್ನಡಕ, ಸತ್ತ ಹೆಂಡತಿಯ ಶವದ ಮುಂದೆ "ಈ ತಾಯಿ ರುಣ ಇವತ್ತಿಗೆ ಮುಗೀತು, ಇನ್ನು ಆ ತಾಯಿ(ದೇಶದ) ತೀರಿಸು" ಎಂದು ಯುದ್ದಕ್ಕೆ ಹೊರಟ ಮಗನಿಗೆ ಹೇಳುವ "ಮುತ್ತಿನ ಹಾರ"ದ ಆ ತಂದೆಯ ಪಾತ್ರ ಯಾರಿಗೆ ತಾನೆ ಇಷ್ಟ ಆಗಲ್ಲ. ಸಿನಿಮಾ ವ್ಯಾಪಾರಕ್ಕೂ ಮೀರಿ ಕಲೆ ಎಂದು ನಂಬಿ ಬಾಳಿ ಬದುಕಿದವರು ಅಶ್ವತ್.
ಎಷ್ಟೇ ಜನಪ್ರೀಯತೆ ಬಂದರು, ಚಿತ್ರದಲ್ಲಿನ ಪಾತ್ರಕ್ಕೆ, ತಾವು ಮಾಡಿದ ನಟನೆಗೆ ತಕ್ಕಂತೆ ತಮಗೆಷ್ಟು ಬೇಕೋ ಅಷ್ಟು ಸಂಭಾವನೆ ಮಾತ್ರ ತೆಗೆದುಕೋಂಡವರು ಅಶ್ವತ್. ಅವರ ಕೊನೆಯ ಚಿತ್ರಕ್ಕೆ ಅವರು ತೆಗೆದುಕೊಂಡ ಸಂಭಾವನೆ ರೂ. 1೦,೦೦೦/- ಮಾತ್ರ. ಒಡಾಟಕ್ಕೆ ಕಾರು ಇಟ್ಟುಕೊಳ್ಳದೆ, ಮೈಸೂರಿನ ಸುತ್ತ ಮುತ್ತ ಶೂಟಿಂಗ್ ಇದ್ದರೆ ಆಟೋದಲ್ಲೋ, ಟಾಂಗಾದಲ್ಲೋ ಹೋಗಿ ಬರುತಿದ್ದರು. ಊಟ ತಿಂಡಿಗೆಂದು ನಿರ್ಮಾಪಕರಿಂದ ಹಣ ಸುಲಿಗೆ ಮಾಡಿದವರಲ್ಲ. ಎ.ಸಿ. ಕಾರು ಕಳಿಸಲಿಲ್ಲ ಅಂತಾನೋ, ಹೊಟೆಲಿನಲ್ಲಿ ಎ.ಸಿ. ರೂಮು ಕೊಡಲಿಲ್ಲ ಅಂತಾನೋ ಶೂಟಿಂಗ್ ಕ್ಯಾನ್ಸಲ್ ಮಾಡೊ ಇವತ್ತಿನ ನಟರು, ಕೇಳಿದ್ದಕ್ಕಿಂತ ಕಡಿಮೆ ಸಂಭಾವನೆ ನೀಡಿದ್ದಾರೆಂದು ರಂಪಾಟ ಮಾಡೊರು, ಇನ್ನೂ ತಾವು ಮಾಡಿದ ಚಿತ್ರ ಬಿಡುಗಡೆಯಾಗದಿದ್ದರೂ ಸಾಲ ಮಾಡಿ ಶೋಕಿ ಮಾಡೊರು, ಒಂದೆರಡು ಚಿತ್ರ ಹಿಟ್ ಅಗ್ತಿದ್ಹಾಗೆ ತಮ್ಮ ಸಂಭಾವನೆ ಎರಿಸೊ ಇವತ್ತಿನ ನಟರು ಅಶ್ವತ್ ರಿಂದ ಕಲಿಯಬೇಕದ್ದು ತುಂಬಾ ಇದೆ.
ಮೇಷ್ಟ್ರೇ, ನಿಂಮ್ಮಿಂದ ಕಲಿಬೇಕಾದ್ದು ತುಂಬಾ ಇದೆ ಮೇಷ್ಟ್ರೇ.